ಪೈಲೋಕಾರ್ಪಿನ್ -
ದಕ್ಷಿಣ ಅಮೆರಿಕದ ಬ್ರಜಿಲ್, ಪೆರು ಮುಂತಾದ ಕಡೆ ಬೆಳೆಯುವ ಜಬೊರ್ಯಾಂಡಿ ಎಂಬ ಸಸ್ಯದ ಒಣ ಎಲೆಗಳಿಂದ ಪಡೆಯಲಾಗುವ ಕ್ಷಾರ ವಸ್ತು. 1875ರಲ್ಲಿ ಗೆರಾರ್ಡ್ ಮತ್ತು ಹಾರ್ಡಿ ಎಂಬುವರಿಂದ ಮೊತ್ತಮೊದಲಿಗೆ ಪ್ರತ್ಯೇಕಿಸಲ್ಪಟ್ಟಿತು. ಜಬೊರ್ಯಾಂಡಿ ಗಿಡದ ಎಲೆಗಳನ್ನು ಅಗಿದರೆ ಸಮೃದ್ಧಿಯಾಗಿ ಜೊಲ್ಲು ಉತ್ಪತ್ತಿಯಾಗುತ್ತದೆ ಎಂಬ ವಿಚಾರ ದಕ್ಷಿಣ ಅಮೆರಿಕದ ಮೂಲನಿವಾಸಿಗಳಿಗೆ ಹಿಂದಿನಿಂದಲೇ ತಿಳಿದಿತ್ತು. ಬ್ರಜಿಲ್ಲಿನ ವೈದ್ಯ ಕೊಟೆನ್‍ಹೊ ಎಂಬಾತ ಈ ಎಲೆಯ ಸಾರವನ್ನು ತೆಗೆದು ಅಭ್ಯಸಿಸಿ ಅದು ಚೆನ್ನಾಗಿ ಬೆವರಿಸುವ ವಿಷಯವನ್ನು ಪ್ರಕಟಿಸಿದ (1874). ಪೈಲೋಕಾರ್ಪಿನ್ ಕಣ್ಣಿನ ಪಾಪೆಗಳನ್ನು ಕುಗ್ಗಿಸುವುದೆಂಬ ಸಂಗತಿಯನ್ನು ವೆಬರ್ ತೋರಿಸಿದ (1876). ಅಸಿಟೈಲ್‍ಕೋಲಿನ್ ಮತ್ತು ಮಸ್ಕರಿನ್ನಿನಂತೆಯೇ ಪೈಲೋಕಾರ್ಪಿನ್ ಕೂಡ ಅನುಸಂವೇದಕ ನರಗಳನ್ನು ಉದ್ರೇಕಿಸಿ ಅನುಗುಣವಾದ ಅನೇಕ ಅನೈಚ್ಛಿಕ ಸ್ನಾಯುಗಳ ಸಂಕೋಚನವನ್ನೂ ಗ್ರಂಥಿಸ್ರಾವಗಳನ್ನೂ ಉಂಟುಮಾಡುತ್ತದೆ. ಅದರೆ ಫುಪ್ಪುಸಗಳಲ್ಲಿ ದ್ರವಶೇಖರಣೆ ಆಗುವಂಥ ಕೆಲವು ದುಷ್ಪರಿಣಾಮಗಳು ಉಂಟಾಗುವುದರಿಂದ ಪೈಲೋಕಾರ್ಪಿನ್ನಿನ ಬಳಕೆ ಈಗ ಕಡಿಮೆ.

ಕಣ್ಣಿನ ಪಾಪೆಗಳನ್ನು ಸಂಕೋಚಿಸಲು ಪೈಲೋಕಾರ್ಪಿನ್ನನ್ನು ಪ್ರಧಾನವಾಗಿ ಬಳಸುವುದುಂಟು. ಇದಕ್ಕಾಗಿ ಪೈಲೋಕಾರ್ಪಿನ್ ನೈಟ್ರೇಟಿನ 0.5-4% ದ್ರಾವಣವನ್ನು ಒಂದೊಂದು ತೊಟ್ಟು ಕಣ್ಣಿಗೆ ಹಾಕಬೇಕು. ಕಣ್ಣಿನ ಮುಲಾಮಾಗಿಯೂ ಇದನ್ನು ಬಳಸುವುದುಂಟು. ನೇತ್ರಪರೀಕ್ಷೆಗಾಗಿ ಅಥವಾ ಇತರ ಕಾರಣಕ್ಕಾಗಿ ಆಟ್ರೊಪಿನ್ನನ್ನು ಬಳಸಿದಾಗ ಕಣ್ಣಿನ ಪಾಪೆಗಳು ಹಿಗ್ಗಿರುತ್ತವೆ. ಇದರಿಂದ ಬೆಳಕಿನಲ್ಲಿ ಕಣ್ಣನ್ನು ಸರಿಯಾಗಿ ಬಿಡುವುದಕ್ಕಾಗದೆ ದೃಷ್ಟಿ ದೋಷ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ದೃಷ್ಟಿ ದೋಷವನ್ನು ಸರಿಪಡಿಸಲು ಪೈಲೋಕಾರ್ಪಿನ್ನನ್ನು ಬಳಸುತ್ತಾರೆ. ಗ್ಲಾಕೋಮ ಎಂಬ ನೇತ್ರವ್ಯಾಧಿಯ ಮೊದಲ ಹಂತಗಳಲ್ಲಿ ಕಣ್ಣಿನ ಪಾಪೆಗಳನ್ನು ಕುಗ್ಗಿಸಿ ತತ್ಪರಿಣಾಮವಾಗಿ ಕಣ್ಣಿನ ಒಳಒತ್ತಡವನ್ನು (ಇಂಟ್ರಆಕ್ಯುಲರ್ ಟೆನ್ಷನ್) ಕಡಿಮೆ ಮಾಡಲು ಪೈಲೋಕಾರ್ಪಿನ್ನನ್ನು ಉಪಯೋಗಿಸುವುದುಂಟು. ಮೂತ್ರ ಕಟ್ಟಿರುವ ಸಂದರ್ಭದಲ್ಲಿ ಮೂತ್ರ ಮಾರ್ಗದಲ್ಲಿ ಅಡಚಣೆ ಇಲ್ಲದಿದ್ದಾಗ ಮಾತ್ರ ಪೈಲೋಕಾರ್ಪಿನ್ನನ್ನು ಕೊಡುತ್ತಾರೆ. ಇದಕ್ಕಾಗಿ ಪ್ರತಿ ಸಲ 6-8% ಮಿಲಿಗ್ರಾಮ್ ಪೈಲೋಕಾರ್ಪಿನ್ನನ್ನು ದಿನಕ್ಕೆ 4 ಬಾರಿ ಕೊಡುವುದಿದೆ. ಮೈ ತುರಿಕೆಯಿದ್ದಾಗ ಮತ್ತು ತಲೆ ಕೂದಲು ಉದುರಿದ್ದಾಗ ಕೂದಲು ಪುನಃ ಬೆಳೆಯುವಂತೆ ಮಾಡಲು ಅಲ್ಪ ಪರಿಮಾಣದಲ್ಲಿ ಪೈಲೋಕಾರ್ಪಿನ್ನನ್ನು ಕೊಡುವುದುಂಟು.

ಪೈಲೋಕಾರ್ಪಿನ್ ವಿಷವಾಗಿ ಸೇವನೆ ಆಗಿದ್ದ ಸಂದರ್ಭದಲ್ಲಿ ಕೃತಕವಾಗಿ ವಮನ ಮಾಡಿಸಬೇಕು. ಲೂಗಲನ ಅಯೋಡಿನನ್ನಾಗಲಿ ಟ್ಯಾನಿಕ್ ಆಮ್ಲವನ್ನಾಗಲಿ ಪ್ರತಿ ವಿಷವಾಗಿ ಕೊಡುವುದೂ ಇದೆ. ಎತ್ತಿದ ಪ್ರತಿವಿಷವೆಂದರೆ ಆಟ್ರೊಪಿನ್. ಇದು ಎಷ್ಟು ಯುಕ್ತ ಎಂದರೆ ನುರಿತ ಪ್ರಥಮ ಚಿಕಿತ್ಸಕ ಇಲ್ಲವೆ ಆಸ್ಪತ್ರೆಯ ದಾದಿ ವೈದ್ಯರಿಗೂ ಕಾಯದೆ 1/100 ಗ್ರೇನ್ ಆಟ್ರೊಪಿನ್ನನ್ನು ಸೂಜಿಮದ್ದಾಗಿ ಕೊಟ್ಟು ಮುಂದಿನ ಶುಶ್ರೂಷೆ ಮಾಡಬೇಕು. 					(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ